ರಾಮನ ಜನನದ ಬಗ್ಗೆ - ರಾಮ ನವಮಿ ಸ್ಪೆಷಲ್ !
ಭಗವಾನ್ ಶ್ರೀರಾಮನು ಕೋಸಲ ದೇಶದ ರಾಜನಾದ ದಶರಥ ಹಾಗೂ ಅವನ ಹಿರಿಯ ರಾಣಿ ಕೌಸಲ್ಯಾದೇವಿಯ ಪ್ರಥಮ ಪುತ್ರನಾಗಿ ತ್ರೇತಾಯುಗದಲ್ಲಿ ಅಯೋಧ್ಯಾ ನಗರದಲ್ಲಿ ಹುಟ್ಟಿದನು . ಈ ದಿನವನ್ನು ಹಿಂದೂಗಳು "ರಾಮ ನವಮಿ" ಎಂಬುದಾಗಿ ಆಚರಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ರಾಮನ ಜನ್ಮದ ಬಗ್ಗೆ ಕೆಲವು ಸ್ವಾರಸ್ಯಕರವಾದ ಮಾಹಿತಿಗಳು ಇಲ್ಲಿವೆ.
ದಶರಥನಿಗೆ ಕೌಸಲ್ಯಾ , ಸುಮಿತ್ರಾ ಮತ್ತು ಕೈಕೇಯಿ ಎಂಬ ಮೂವರು ರಾಣಿಯರಿದ್ದರೂ ಗಂಡು ಸಂತಾನವಿಲ್ಲದಿದ್ದರಿಂದ "ಪುತ್ರಕಾಮೇಷ್ಠಿ ಯಜ್ಞ" ವನ್ನು ಮಾಡುತ್ತಾನೆ. ಯಜ್ಞದ ಕೊನೆಯಲ್ಲಿ ಅಗ್ನಿ ದೇವಾನು ಪ್ರಸನ್ನನಾಗಿ ಪಾಯಸದ ತಟ್ಟೆಯೊಂದನ್ನು ಕೊಟ್ಟನು . ದಶರಥನು ಪಾಯಸದ ಅರ್ಧ ಭಾಗವನ್ನು ಕೌಸಲ್ಯೆಗೂ, ಅದರ ಅರ್ಧ ಭಾಗ ಅಂದರೆ ಕಾಲು ಭಾಗವನ್ನು ಕೈಕೇಯಿಗೂ , ಹಾಗೂ ಕೈಕೇಯಿಯ ಪಾಲಿನ ಅರ್ಧ ಅಂದರೆ ಎಂಟನೇ ಒಂದು ಭಾಗದಷ್ಟು ಪಾಯಸವನ್ನು ಸುಮಿತ್ರೆಗೆ ನೀಡಿದನು . ಆಮೇಲೂ ಉಳಿದ ಎಂಟನೇ ಒಂದು ಭಾಗದಷ್ಟು ಪಾಯಸವನ್ನು ಪುನಃ ಸುಮಿತ್ರೆಗೇ ಕೊಟ್ಟನು.
ಇದಾದ ಒಂದು ವರ್ಷದೊಳಗೆ ದಶರಥನಿಗೆ ನಾಲ್ಕು ಗಂಡು ಮಕ್ಕಳು ಜನಿಸುತ್ತಾರೆ.
ರಾಮನ ಜನನ ಕೌಸಲ್ಯೆಯ ಗರ್ಭದಿಂದ ಚೈತ್ರಮಾಸದ ಶುಕ್ಲ ಪಕ್ಷ ನವಮಿಯಂದು ಪುನರ್ವಸು ನಕ್ಷತ್ರದಂದು ಆಯಿತು.
ಅದರ ಮರುದಿನ ಅಂದರೆ ಶುಕ್ಲ ಪಕ್ಷ ಪುಷ್ಯಾ ನಕ್ಷತ್ರದಲ್ಲಿ ಕೈಕೇಯಿಯು ಭರತನಿಗೆ ಜನ್ಮವಿತ್ತಳು.
ಅದರ ಮಾರನೇ ದಿನ , ಚೈತ್ರ ಮಾಸ ಶುಕ್ಲ ಪಕ್ಷ ಆಶ್ಲೇಷಾ ನಕ್ಷತ್ರದಂದು ರಾಣಿ ಸುಮಿತ್ರೆಯು ಲಕ್ಷ್ಮಣ ಅಂಡ್ ಶತ್ರುಘ್ನ ಎಂಬ ಅವಳಿ ಮಕ್ಕಳಿಗೆ ಜನ್ಮವಿತ್ತಳು.
ಗಮನಿಸಬೇಕಾದ ಅಂಶವೆಂದರೆ ರಾಮನಿಗೂ, ಭರತ ನಿಗೂ, ಲಕ್ಷ್ಮಣ ಶತ್ರುಘ್ನರಿಗೂ ಇರುವ ವಯಸ್ಸಿನ ಅಂತರ ಒಂದೆರಡು ದಿನಗಳು ಮಾತ್ರ ! ಬಹಳಷ್ಟು ಜನರು ಭರತ - ಶತ್ರುಘ್ನರು ಅವಳಿಗಳೆಂದು ನಂಬಿರುತ್ತಾರೆ . ಅದು ತಪ್ಪು .
ದಶರಥನಿಗೆ ನಾಲ್ಕು ಗಂಡು ಮಕ್ಕಳಾಗುವ ಮೊದಲು , ಶಾಂತಾ ಎಂಬ ಹೆಸರಿನ ಮಗಳು ಕೌಸಲ್ಯೆಯ ಗರ್ಭದಿಂದ ಜನಿಸಿದ್ದಳು. ಆದರೆ ಈ ಮಗುವನ್ನು ಬಹಳ ಚಿಕ್ಕ ವಯಸ್ಸಿನಲ್ಲಿ ಸಂತಾನಹೀನರಾದ ಕೌಸಲ್ಯೆಯ ಸಹೋದರಿ ವರ್ಷಿಣಿ ಹಾಗೂ ಅವಳ ಗಂಡ ಅಂಗದೇಶದ (ಈಗಿನ ಬಿಹಾರ ) ದೊರೆ ರೋಮಪಾದನಿಗೆ ದತ್ತು ಕೊಟ್ಟಿದ್ದರು . ಶಾಂತಾದೇವಿಯ ಗಂಡ ಋಷ್ಯಶೃಂಗ ಎಂಬ ಹೆಸರಿನ ಮಹಾಮುನಿ. ಒಮ್ಮೆ ಅಂಗದೇಶದಲ್ಲಿ ಭೀಕರ ಬರಗಾಲ ಬಂದಿದ್ದಾಗ ರೋಮಪಾದ ದೊರೆಯು ಕಾಡಿನಲ್ಲಿದ್ದ ಋಷ್ಯಶೃಂಗ ನನ್ನು ಅಂಗದೇಶಕ್ಕೆ ಬರಮಾಡಿಕೊಂಡನೆಂದೂ , ಅವನ ಆಗಮನದಿಂದ ಬರಗಾಲವೆಲ್ಲಾ ದೂರವಾಯಿತೆಂದೂ , ಮಹಾರಾಜನು ಪ್ರಸನ್ನನಾಗಿ ತನ್ನ ಮಗಳು ಶಾಂತಾ ದೇವಿಯನ್ನು ಋಷ್ಯಶೃಂಗ ಮುನಿಗೆ ಮದುವೆ ಮಾಡಿಕೊಟ್ಟನೆಂದು ಪುರಾಣಗಳು ಹೇಳುತ್ತವೆ.
ಅಂದ ಹಾಗೆ ಈ ಋಷ್ಯಶೃಂಗ ಮುನಿ ಬೇರೆ ಯಾರೂ ಅಲ್ಲ . ದಶರಥನು ಪುತ್ರಕಾಮೇಷ್ಟಿ ಯಾಗ ಮಾಡ ಹೊರಟಾಗ , ಅದನ್ನು ಮಾಡಿಕೊಡಲು ಯಾರು ಯೋಗ್ಯರು ಎಂದು ಗುರು ವಶಿಷ್ಠರನ್ನು ಕೇಳಲಾಗಿ ಅವರು ಹೆಸರಿದ ಮುಖ್ಯ ಪುರೋಹಿತರೇ ಋಷ್ಯಶೃಂಗರು . ವಾಲ್ಮೀಕಿ ರಾಮಾಯಣವು ಶಾಂತಾ ದೇವಿಯು ದಶರಥನ ಮಗಳು ಎಂದು ಸ್ಪಷ್ಟವಾಗಿ ಹೇಳುವುದಿಲ್ಲವಾದರೂ , ರೋಮಪಾದನ ಮಗಳು , ಋಷ್ಯಶೃಂಗನ ಪತ್ನಿ ಎಂದು ಉಲ್ಲೇಖ ಬರುತ್ತದೆ . ಅಂದ ಹಾಗೆ ಋಷ್ಯಶೃಂಗರಿಗೆ ಕರ್ನಾಟಕದ ನಂಟು ಸಹ ಇದೆ. ಚಿಕ್ಕಮಗಳೂರು ಜಿಲ್ಲೆಯ ಕಿಗ್ಗ ಗ್ರಾಮದಲ್ಲಿ ಋಷ್ಯಶೃಂಗರು ತಮ್ಮ ಪತ್ನಿಯೊಂದಿಗೆ ನೆಲೆಸಿದ್ದರಂತೆ, ಅದರ ಪ್ರತೀಕವಾಗಿ ಅಲ್ಲಿ ಈಗಲೂ ಪ್ರಸಿದ್ದವಾದ ಶಾಂತಾ ಸಮೇತ ಋಷ್ಯಶೃಂಗ ದೇವಾಲಯವಿದೆ. ಕಿಗ್ಗದ ಹೆಸರು ಕೇಳದವರೂ ಕಿಗ್ಗ ಗ್ರಾಮದ ಸಮೀಪದಲ್ಲೇ ಇರುವ ಋಷ್ಯಶೃಂಗರ ಹೆಸರಿನದ್ದೇ ಆದ "ಶೃಂಗೇರಿ" ಪವಿತ್ರ ಪುಣ್ಯ ಸ್ಥಳದ ಹೆಸರಂತೂ ಕೇಳೇ ಇರುತ್ತೀರಿ. ಕನ್ನಡ ಸಾಹಿತ್ಯಾಸಕ್ತರೂಸಹ - ಒಬ್ಬನು ಊರಿಗೆ ಮಳೆ ತರುವ ಕಥಾ ಹಂದರ ಇರುವ - ಚಂದ್ರಶೇಖರ ಕಂಬಾರ ವಿರಚಿತ ನಾಟಕ ಹಾಗೂ ಅದೇ ಹೆಸರಿನ ಚಲನಚಿತ್ರ "ಋಷ್ಯಶೃಂಗ" ವನ್ನು ನೆನಪಿಸಿಕೊಳ್ಳಬಹುದು.
ರಾಮ ಹಾಗೂ ಭರತರ ಜನನ ಕೆಲವೇ ಗಂಟೆಗಳ ವ್ಯತ್ಯಾಸದಲ್ಲಿ ಆಯಿತು. ಒಂದು ವೇಳೆ ಭರತನು ಮೊದಲು ಹುಟ್ಟುತ್ತಿದ್ದಲ್ಲಿ ರಾಮಾಯಣವೇ ನಡೆಯುತ್ತಿರಲಿಲ್ಲವೇನೋ ? ಅದೇ ರೀತಿ ಹುಟ್ಟಿದ ಮೊದಲ ಮಗಳನ್ನೇ , ಬೇರೆ ಮಕ್ಕಳು ಹುಟ್ಟುವ ಮೊದಲೇ ದಶರಥನು ಹೇಗೆ ದತ್ತು ಕೊಟ್ಟ ಎಂದು ಊಹಿಸಲು ಕಷ್ಟ. ಆದರೆ ಆಕೆಯ ಕೈಹಿಡಿದ ಪತಿಯೇ, ಪುತ್ರಕಾಮೇಷ್ಟಿ ಯಜ್ಞದ ಮುಖ್ಯ ಪುರೋಹಿತನಾಗಿ ಆಕೆಯ ತಮ್ಮಂದಿರ - ಅದರಲ್ಲೂ ಮುಖ್ಯವಾಗಿ ರಾಮಾಯಣದ ನಾಯಕ ಶ್ರೀರಾಮನ ಜನ್ಮಕ್ಕೂ ಕಾರಣ ಕರ್ತನಾದ ಎಂಬುದೂ ಸತ್ಯ. ಇದರಿಂದಲೇ ಭಗವಂತನ ಇಚ್ಛೆ ಏನಿದೆಯೋ ಅದನ್ನು ಸಾಮಾನ್ಯರಾದ ನಾವು ಊಹಿಸಲೂ ಸಾಧ್ಯವಿಲ್ಲ ಎಂದು ವೇದ್ಯವಾಗುತ್ತದೆ.
Comments
Post a Comment